
“ಔಷಧಿ ಮುಕ್ತ ಹಾಗೂ ಕಾಯಿಲೆ ಮುಕ್ತ ಗ್ರಾಮ ನಮ್ಮ ಗುರಿ “
ಕೊರೊನಾ ಸಮಯದಲ್ಲಿ ಆರೋಗ್ಯದ ಸಮಸ್ಯೆ ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರದೆ ಹಳ್ಳಿಗಳಿಗೂ ವ್ಯಾಪಿಸಿತ್ತು. ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲದೇ ಆರೋಗ್ಯ ಕಾಪಾಡಿಕೊಳ್ಳುವುದೊಂದೆ ಪರಿಹಾರವಾಗಿತ್ತು. ಇಂತಹ ಸಮಯದಲ್ಲಿ ಆರೋಗ್ಯವಾಗಿರುವ ವ್ಯಕ್ತಿ ಬದುಕಿದರೆ ಆರೋಗ್ಯ ಕಾಪಾಡಿಕೊಳ್ಳದವರು ಸಾವಿಗೀಡಾಗಿದ್ದರು. ಹಳ್ಳಿಗಳು ಆರೋಗ್ಯವಾಗಿದ್ದರೆ ಇಡೀ ದೇಶವೆ ಆರೋಗ್ಯವಾಗಿರುತ್ತದೆ ಹಾಗೂ ಆರ್ಥಿಕವಾಗಿ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ.
ಸಹಜವಾಗಿ ಹಳ್ಳಿಗಳಲ್ಲಿ ಆರೋಗ್ಯ ಶಿಬಿರಗಳನ್ನು ಮಾಡುವ ವೈದ್ಯರು ಕೆಲವೇ ಕೆಲವು ಪರೀಕ್ಷೆಗಳನ್ನು ಮಾಡಿ ಔಷಧಿಗಳನ್ನು ನೀಡಿ ಆಗಿಂದಾಗ್ಗೆ ತಮ್ಮ ಆಸ್ಪತ್ರೆಗೆ ಬರುವಂತೆ ಹೇಳುತ್ತಾರೆ. ಇದರಿಂದ ನಾವು ಆರೋಗ್ಯವಾಗಿರುವ ಹಳ್ಳಿಗರ ಮನಸ್ಸಿನಲ್ಲಿ ಕಾಯಿಲೆ ಇದೆ ಎಂಬಂತೆ ಆತಂಕಕ್ಕೆ ಒಳಗಾಗುವಂತೆ ಮಾಡಲಾಗುತ್ತಿದೆ. ಜತೆಗೆ ತಾತ್ಕಾಲಿಕ ಔಷಧಿಗಳನ್ನು ಪಡೆದು ಅವುಗಳಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಅರಿವಿಲ್ಲದ ಮುಗ್ಧ ಜನರು ಅನವಶ್ಯಕವಾಗಿ ಮಾತ್ರೆಗಳನ್ನು ಸೇವಿಸಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಹಳ್ಳಿಯ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ನಾವು ವಿಷೇಷವಾಗಿ ಹಮ್ಮಿಕೊಂಡ ಕಾರ್ಯಕ್ರಮವೇ ‘ಆರೋಗ್ಯ ಗ್ರಾಮ ವಾಸ್ತವ್ಯ’
ಇದು ಕೇವಲ ಒಂದು ದಿನದ ಆರೋಗ್ಯ ಶಿಬಿರವಾಗಿರದೆ ಸತತ 3ರಿಂದ 4 ತಿಂಗಳು ಕಾಲ ಆ ಗ್ರಾಮದಲ್ಲಿ ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಉಳಿದುಕೊಳ್ಳಲಾಗುವುದು. ಹಳ್ಳಿಯ ಪ್ರತಿ ವ್ಯಕ್ತಿಯ ಆರೋಗ್ಯ ಬಗ್ಗೆ ಮಾಹಿತಿ ಪಡೆದು ಅನಾರೋಗ್ಯದಿಂದ ಬಳಲುತ್ತಿರುವವರನ್ನು ಪಟ್ಟಿ ಮಾಡಿ, ಅವಶ್ಯಕತೆ ಇರುವವರಿಗೆ ಔಷಧಿ ಕೊಡುವುದರ ಜೊತೆಗೆ, ಪ್ರತಿದಿನ ಆರೋಗ್ಯಕರ ಆಹಾರ ಒದಗಿಸುವುದು ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ಪ್ರತಿನಿತ್ಯವೂ ಆರೋಗ್ಯ ತಪಾಸಣೆ ನಡೆಸುವುದರ ಜೊತೆಗೆ ಮಕ್ಕಳಂತೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಕ್ರಮೇಣ ಈಗಾಗಲೇ ಉಪಯೋಗಿಸುತ್ತಿರುವ ಔಷಧಿ, ಮಾತ್ರೆಗಳನ್ನು ಕಡಿಮೆ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ.
ಸಂಪೂರ್ಣವಾಗಿ ಔಷಧಿ ಮುಕ್ತ ಹಾಗೂ ಕಾಯಿಲೆ ಮುಕ್ತ ಗ್ರಾಮವನ್ನಾಗಿಸುವುದರ ಜೊತೆಗೆ ಈ ವಿಶೇಷ ಯೋಜನೆಯನ್ನು ಇನ್ನೂ ಹೆಚ್ಚು ಹಳ್ಳಿಗಳಿಗೆ ವಿಸ್ತರಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಈ ಬಾರಿ ನಾವು ಚಾಮರಾಜನಗರ ಜಿಲ್ಲೆಯ ಯಳಂದುರೂ ತಾಲೂಕಿನ ದಾಸನಹುಂಡಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈ ಹಳ್ಳಿಯನ್ನು ದತ್ತು ಪಡೆದು ಸಂಪೂರ್ಣ ಆರೋಗ್ಯಕರ ಗ್ರಾಮ ಮಾಡುವುದು ನಮ್ಮ ಆಶಯ.
ಕೊರೊನಾವೈರಸ್‌ನ ಹೊಸ ತಳಿ ‘ಒಮಿಕ್ರಾನ್’ ಬಗ್ಗೆ ‘ಜನಸಾಮಾನ್ಯರ ವೈದ್ಯ’ ಡಾ.ರಾಜು ಹೇಳುವುದೇನು?
ಕೊರೊನಾವೈರಸ್‌ನ ಹೊಸ ತಳಿ ಒಮಿಕ್ರಾನ್ ಕಾಣಿಸಿಕೊಂಡ ಬಳಿಕ ಹರಿದಾಡುತ್ತಿರುವ ಅಂತೆ-ಕಂತೆಗಳು ಒಂದೆರೆಡಲ್ಲ.
ಒಮಿಕ್ರಾನ್ ಅಪಾಯಕಾರಿಯಂತೆ! ವೇಗವಾಗಿ ಹರಡುತ್ತದೆಯಂತೆ! ಎಲ್ಲೆಡೆ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆಯಂತೆ! ನಾವೀಗ ಪಡೆದುಕೊಂಡಿರುವ ಲಸಿಕೆ (ವ್ಯಾಕ್ಸಿನ್) ಕೆಲಸ ಮಾಡಲ್ವಂತೆ! ಸರ್ಕಾರ ಲಾಕ್‌ಡೌನ್ ಘೋಷಿಸಲಿದೆಯಂತೆ! ಎಂಬಿತ್ಯಾದಿ ಸುದ್ದಿಗಳು ಪ್ರಸಾರವಾಗುತ್ತಿವೆ. ಇದರಿಂದ ಸಹಜವಾಗಿಯೇ ಆತಂಕ ಹೆಚ್ಚಾಗಿದ್ದು, ಜನರಲ್ಲೂ ಸಾಕಷ್ಟು ಪ್ರಶ್ನೆಗಳು ಮೂಡಿವೆ.
ಈಚೆಗೆ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿರುವ ಈ ರೂಪಾಂತರಿ ತಳಿಗೆ ‘ಬಿ1.1.529’ ಎಂದು ಕೋಡ್ ನೀಡಲಾಗಿದ್ದು, ‘ಒಮಿಕ್ರಾನ್’ ಎಂದು ಹೆಸರಿಸಲಾಗಿದೆ.
ಒಮಿಕ್ರಾನ್ ಅಪಾಯಕಾರಿಯೇ?
ಕೋವಿಡ್‌ನ ಎರಡನೇ ಅಲೆಯಲ್ಲಿ ನಾವು ನೋಡಿದ್ದ ʼಡೆಲ್ಟಾʼ ತಳಿಗಿಂತಲೂ ವೇಗವಾಗಿ ಸೋಂಕು ಹರಡಬಲ್ಲದು ಮತ್ತು ಈಗ ಪಡೆದುಕೊಂಡಿರುವ ಲಸಿಕೆ ಈ ತಳಿ ಎದುರು ಕೆಲಸ ಮಾಡಲಾರದು ಎನ್ನಲಾಗುತ್ತಿರುವುದರಿಂದ ʼಒಮಿಕ್ರಾನ್ʼ ಅಪಾಯಕಾರಿ ಎನಿಸಿಕೊಂಡಿದೆ. ಆದರೆ, ಈವರೆಗೆ ಇದ್ದ ವೈರಸ್‌ನ ತಳಿಗೂ ನಮ್ಮಲ್ಲಿ ನಿರ್ದಿಷ್ಟ ಔಷಧ ಇರಲಿಲ್ಲ ಎಂಬುದು ಸತ್ಯ.
ಯಾವುದೇ ಲಸಿಕೆಯನ್ನು ಮೃತ ವೈರಸ್‌ನ ಜೀವಕೋಶವನ್ನು ಬಳಸಿ ಸಿದ್ಧಪಡಿಸಲಾಗುತ್ತದೆ. ಅದು ಆ ಒಂದು ಬಗೆಯ ತಳಿ ಮೇಲೆ ಮಾತ್ರವೇ ಕೆಲಸ ಮಾಡುತ್ತದೆ. ಒಂದುವೇಳೆ ವೈರಸ್ ರೂಪಾಂತರಗೊಂಡು ಬೇರೊಂದು ತಳಿ ಸೃಷ್ಟಿಯಾದರೆ, ಆ ಲಸಿಕೆ ಕೆಲಸ ಮಾಡುವುದಿಲ್ಲ.
ಹಾಗೆಯೇ ಗಮನಿಸಬೇಕಾದ ಮತ್ತೊಂದು ವಿಚಾರವೆಂದರೆ, ಒಮಿಕ್ರಾನ್ ಅಪಾಯಕಾರಿ ಎನಿಸುವಷ್ಟು ವೇಗದಲ್ಲಿ ಹರಡಲಾರದು ಎಂಬುದು. ಡೆಲ್ಟಾ ತಳಿಯಿಂದಾಗಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದ ಪ್ರಕರಣಗಳ ಪ್ರಮಾಣ ಶೇಕಡಾ ನೂರರಷ್ಟಿತ್ತು. ಆದರೆ, ಒಮಿಕ್ರಾನ್ ಏರಿಕೆ ಪ್ರಕರಣಗಳು ಆ ರೀತಿ ಇಲ್ಲ. ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ 30 ಪ್ರಕರಣಗಳು ಕಾಣಿಸಿಕೊಂಡಿವೆ ಎನ್ನಲಾಗಿತ್ತು. ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾಗಿರಬಹುದು ಆದರೆ, ಅದು ಇನ್ನೂ ಸಾವಿರ ಅಥವಾ ಲಕ್ಷವಾಗಿ ಬದಲಾಗಿಲ್ಲ.
ಬೆಲ್ಜಿಯಂ, ಹಾಂಕಾಂಗ್, ಇಸ್ರೇಲ್ ಮತ್ತು ಇನ್ನೂ ಕೆಲವು ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದೆ ಎನ್ನಲಾಗುವ ಈ ತಳಿಯ ಪ್ರಕರಣಗಳು ಬೆರಳೆಣಿಕೆಯಷ್ಟೇ ಇವೆ. ಹಾಗಾಗಿ, ಒಮಿಕ್ರಾನ್ ವೇಗವಾಗಿ ಹರಡುತ್ತದೆ ಎಂಬುದು ಶುದ್ಧ ಸುಳ್ಳು. ಡೆಲ್ಟಾಗಿಂತ ಅಪಾಯಕಾರಿ ಎಂಬುದೂ ನಿಜವಲ್ಲ.
ವೈದ್ಯರು ಹೇಳುವುದೇನು?
ದಕ್ಷಿಣ ಆಫ್ರಿಕಾದಲ್ಲಿ ಈ ತಳಿಯ ಸೋಂಕು ತಗುಲಿರುವವರಲ್ಲಿ ಸುಸ್ತು, ಮೈ-ನೋವು, ಗಂಟಲು ಕೆರೆತ, ಒಣ ಕೆಮ್ಮಿನ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ವೈದ್ಯರು ಹೇಳಿದ್ದಾರೆ. ಕೆಲವರಿಗಷ್ಟೇ ಜ್ವರ ಬಂದಿದೆ ಎಂದೂ ತಿಳಿಸಿದ್ದಾರೆ. ಸೋಂಕಿನ ಪರಿಣಾಮ ಉಂಟಾಗುತ್ತಿರುವುದು ಶ್ವಾಸಕೋಶದ ಮೇಲ್ವಾಗದಲ್ಲಿ ಮಾತ್ರವೇ ಎಂಬುದನ್ನು ಈ ಲಕ್ಷಣಗಳು ಒತ್ತಿ ಹೇಳುತ್ತಿವೆ. ಶ್ವಾಸಕೋಶ ಅಥವಾ ಅದರಿಂದ ಕೆಳಭಾಗಕ್ಕೆ ಒಮಿಕ್ರಾನ್ ಪರಿಣಾಮವಿಲ್ಲ ಎಂಬುದು ಗೊತ್ತಾಗುತ್ತಿದೆ.
ಶ್ವಾಸಕೋಶಕ್ಕೆ ತೊಂದರೆಯಾಗಿದ್ದಿದ್ದರೆ, ಉಸಿರಾಟಕ್ಕೂ ಸಮಸ್ಯೆಯಾಗುತ್ತಿತ್ತು. ಸ್ಯಾಚುರೇಷನ್ (saturation) ಮಟ್ಟ ಕುಸಿಯಬೇಕಿತ್ತು. ಆದರೆ ಈ ಯಾವ ಸಮಸ್ಯೆಗಳೂ ಕಾಣಿಸಿಕೊಂಡಿಲ್ಲ ಎನ್ನಲಾಗಿದೆ. ಹಾಗಾಗಿ ಇದೊಂದು ಸಾಮಾನ್ಯ ವೈರಸ್ ಎಂದು ಪರಿಗಣಿಸಬಹುದು. ಭಯಪಡುವ ಅಗತ್ಯವೇ ಇಲ್ಲ. ಒಂದುವೇಳೆ ಇದು ವೇಗವಾಗಿ ಹರಡಲಾರಂಭಿಸಿದರೂ ಆತಂಕಪಡಬೇಕಿಲ್ಲ.
ಒಮಿಕ್ರಾನ್ ಇರುವುದು ನಿಜವೇ?
ಕೋವಿಡ್ ಹೆಸರಿನಲ್ಲಿ ಔಷಧಗಳು ಅತಿಹೆಚ್ಚು ದುರ್ಬಳಕೆಯಾದದ್ದು ಭಾರತದಲ್ಲೇ. ಬೇರೆ ದೇಶಗಳಲ್ಲಿ ವೈದ್ಯರ ಸಲಹೆಗಳಿಲ್ಲದೆ ಯಾವುದೇ ಔಷಧ/ಮಾತ್ರೆಯನ್ನು ಔಷದಾಲಯಗಳು (ಮೆಡಿಕಲ್ಸ್) ನೀಡುವುದಿಲ್ಲ. ಆದರೆ ನಮ್ಮಲ್ಲಿ, ಹಾಗಾಗಲಿಲ್ಲ. ಮನೆಯಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದ್ದರೆ, ಉಳಿದ ಸದಸ್ಯರೆಲ್ಲ ಅನಗತ್ಯವಾಗಿ ಔಷಧ ಸೇವಿಸುವುದು ಕಂಡು ಬಂತು. ಔಷದಾಲಯಗಳು ಯಾವುದೇ ಎಚ್ಚರಿಕೆ ಇಲ್ಲದೆ ಅವುಗಳನ್ನು ಪೂರೈಸುತ್ತಿದ್ದವು. ಆದರೆ, ನಮ್ಮ ದೇಶದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಬಳಸಲಾಗುತ್ತಿದ್ದ ಯಾವುದೇ ಔಷಧದ ಪರಿಣಾಮ ʼಶೂನ್ಯʼ ಪ್ರಮಾಣದಲ್ಲಿ ಇತ್ತು ಎಂಬುದು ಅಚ್ಚರಿಯ ಸಂಗತಿ.
ಔಷಧಗಳು ಯಾವಾಗ ಪರಿಣಾಮಕಾರಿಯಾಗಿ ಕೆಲಸ ಮಾಡಲಿಲ್ಲವೋ, ಆಗ ವೈರಸ್ ರೂಪಾಂತರಗೊಳ್ಳಲು ಅನುಕೂಲವಾಯಿತು. ನಮ್ಮ ದೇಶದಲ್ಲಿ ಆಗಿದ್ದೂ ಅದೇ!
ಕೋವಿಡ್ ಸಂದರ್ಭದಲ್ಲಿ ಔಷಧಗಳು ಪ್ರಪಂಚದಲ್ಲೇ ಅತಿಹೆಚ್ಚು ದುರ್ಬಳಕೆಯಾದದ್ದು, ವೈರಸ್‌ನ ರೂಪಾಂತರ ಹೆಚ್ಚಿನ ಪ್ರಮಾಣದಲ್ಲಿ ಆದದ್ದು ಭಾರತದಲ್ಲೇ. ಅಷ್ಟೇ ಅಲ್ಲ. ಜನರ ದೇಹದಲ್ಲಿನ ಪ್ರತಿರೋಧಕ ಶಕ್ತಿಯನ್ನೂ ಈ ಔಷಧಗಳು ಕುಸಿಯುವಂತೆ ಮಾಡಿವೆ.
ಉಪಯೋಗಕ್ಕೆ ಬಾರದ ಔಷಧಗಳ ಬಳಕೆ ಏಕೆ?
ಕೋವಿಡ್ ಹೆಸರಲ್ಲಿ ಸೃಷ್ಟಿಯಾದ ಮಾಫಿಯಾಗಳು ಇದಕ್ಕೆ ಮುಖ್ಯ ಕಾರಣ.
ಔಷಧ ಕಂಪೆನಿಗಳ ದುಡ್ಡು ಮಾಡುವ ಹಂಬಲದಿಂದ ಸೃಷ್ಟಿಯಾದ ʼಡ್ರಗ್ ಮಾಫಿಯಾʼ ಉಪಯೋಗಕ್ಕೆ ಬಾರದ ಔಷಧಗಳ ಬಳಕೆಗೆ ಮೊದಲ ಕಾರಣ. ಹತ್ತು ವರ್ಷಕ್ಕೆ ಆಗುವಷ್ಟು ಔಷಧಗಳ ವ್ಯಾಪಾರ ಕೋವಿಡ್ ಸಂದರ್ಭದಲ್ಲೇ ಆಗಿಬಿಟ್ಟಿದೆ. ಔಷಧ ಕಂಪೆನಿಗಳ ಆದಾಯ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿದೆ.
ಈ ವಿಚಾರದಲ್ಲಿ ಆಸ್ಪತ್ರೆಗಳೇನೂ ಹಿಂದೆ ಬಿದ್ದಿಲ್ಲ. ಹಲವು ಆಸ್ಪತ್ರೆಗಳು ತಮ್ಮಲ್ಲಿಗೆ ದಾಖಲಾದ ಕೊರೊನಾ ಸೋಂಕಿತರಿಗೆ ಅನವಶ್ಯಕವಾಗಿ ಔಷಧ ನೀಡಿ ಬಿಲ್ ಹೆಚ್ಚಿಸಿ ಹಣ ಮಾಡಿಕೊಂಡಿವೆ.
ಖಾಯಿಲೆ ಇರಲಿ, ಇಲ್ಲದಿರಲಿ, ರಾಜಕಾರಣಿಗಳು ಪ್ರತಿಯೊಬ್ಬರಿಗೂ ಕೊಟ್ಟ ʼಕೋವಿಡ್ ಮೆಡಿಸಿನ್ ಕಿಟ್ʼ ಕೂಡ ಮಾಫಿಯಾದ ಒಂದು ಭಾಗ. ಪ್ರತಿ ಮನೆಯನ್ನೂ ತಲುಪುವ ಪ್ರಚಾರದ ಹಪಹಪಿ ಹಾಗೂ ಕಮಿಷನ್ ಆಸೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಕಿಟ್‌ಗಳನ್ನು ಹಂಚಿದ್ದರ ಹಿಂದೆ ಜನರ ಕಲ್ಯಾಣದ ಯಾವುದೇ ಉದ್ದೇಶವಿಲ್ಲ.
ನಮ್ಮಲ್ಲಿ ಸರಿಯಾದ ಪ್ರಮಾಣದಲ್ಲಿ ಸಂಶೋಧನೆ ನಡೆದಿದ್ದರೆ, ಔಷಧ ದುರ್ಬಳಕೆಯಿಂದ ಸೃಷ್ಟಿಯಾಗಿರುವ ಸಾವಿರಾರು ಸಂಖ್ಯೆಯ ರೂಪಾಂತರಿ ವೈರಸ್‌ಗಳು ಪತ್ತೆಯಾಗುತ್ತಿದ್ದವು. ಇಷ್ಟಿದ್ದರೂ, ದಕ್ಷಿಣ ಆಫ್ರಿಕಾದ ತಳಿ ಬಗ್ಗೆ ನಾವು ಹೆದರುತ್ತಿರುವುದಕ್ಕೆ ಅರ್ಥವೇ ಇಲ್ಲ. ರೂಪಾಂತರಿ ತಳಿಯ ಬಗ್ಗೆ ಭಯ ಪಡಬೇಕಿಲ್ಲ. ಸುರಕ್ಷಿತವಾಗಿರಿ.
ಬಿಪಿ ಮಾತ್ರೆ ತೆಗೆದುಕೊಳ್ಳುವುದನ್ನು ತಕ್ಷಣದಿಂದಲೇ ನಿಲ್ಲಿಸಬಹುದೆ?
ಬಿಪಿ ಮಾತ್ರೆ ತೆಗೆದುಕೊಳ್ಳುವುದನ್ನು ಕೂಡಲೇ ನಿಲ್ಲಿಸಬಹುದೇ?, ಮುಂದುವರಿಸಬಹುದೇ ಎಂಬ ಪ್ರಶ್ನೆಗಳು ಮೂಡುವುದು ಸಹಜ. ಆದರೆ, ಬಿಪಿ ಮಾತ್ರೆ ತೆಗೆದುಕೊಳ್ಳುವುದು ಕಾಯಿಲೆಯ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಒಂದು ವೇಳೆ ಬಿಪಿ ಜಾಸ್ತಿ ಇದ್ದು, ಲಕ್ಷಣಗಳು ಹೊಂದಿರುವುದು ಕಂಡುಬಂದರೆ ಮಾತ್ರ ವೈದ್ಯರ ಸಲಹೆ ಮೇರೆಗೆ ಮಾತ್ರೆ ತೆಗೆದುಕೊಳ್ಳುವುದನ್ನು ಮುಂದುವರಿಸಬಹುದು.
ಕೆಲವರಿಗೆ ಬಿಪಿ ಲಕ್ಷಣಗಳಿರುವುದಿಲ್ಲ. ಆದರೆ, ಕುಟುಂಬದಲ್ಲಿ ಪೋಷಕರಿಗೆ ಬಿಪಿ ಇದೆ ಎಂಬ ಕಾರಣಕ್ಕೆ ಆತಂಕಕ್ಕೆ ಒಳಗಾಗಿರುತ್ತಾರೆ. ನಿಮ್ಮ ತಂದೆ– ತಾಯಿ ಅವರಿಗೆ ಬಿಪಿ ಇದೆ ಎಂಬ ಕಾರಣಕ್ಕೆ ನೀವೂ ಮಾತ್ರೆ ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ. ಬಿಪಿ ಎಂಬುದು ಜೀವನಶೈಲಿ ಆಧರಿಸಿರುವ ಕಾಯಿಲೆಯಾಗಿದೆಯೇ ಹೊರತು ವಂಶ ಪಾರಂಪರ್ಯವಾಗಿ ಬರುವ ಕಾಯಿಲೆಯಲ್ಲ ಎಂಬುದನ್ನು ಅರಿತುಕೊಳ್ಳಬೇಕು.
ಕೆಲವೇ ಕೆಲವು ತಿಂಗಳುಗಳಿಂದ ಬಿಪಿ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ, ಕ್ರಮೇಣ ಜೀವನಶೈಲಿಗೆ ಅನುಗುಣವಾಗಿ ಒಂದು ವಾರ ಅಥವಾ ಹದಿನೈದು ದಿನಗಳಿಗೊಮ್ಮೆ ವೈದ್ಯರ ಬಳಿ ತಪಾಸಣೆಗೆ ಒಳಪಡಬೇಕು. ವೈದ್ಯರ ಸಲಹೆ ಮೇರೆಗೆ ಹಂತ ಹಂತವಾಗಿ ಡೊಸೆಜ್ ಕಡಿಮೆ ಮಾಡಿಕೊಳ್ಳುವ ಮುಲಕ ಮಾತ್ರೆ ತೆಗೆದುಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಬಹುದು.
ಬಿಪಿ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೆ ಅನಾವಶ್ಯಕವಾಗಿ ಮಾತ್ರೆ ತೆಗೆದುಕೊಳ್ಳಬಾರದು. ಆತಂಕಕ್ಕೆ ಒಳಗಾಗಿ ಮಾತ್ರೆಯನ್ನು ತೆಗೆದುಕೊಳ್ಳುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ರಕ್ತದ ಒತ್ತಡ, ಸುಸ್ತು, ಮೈ–ಕೈ ನೋವು ಕಂಡು ಬಂದಾಗ ಬಿಪಿ ಮಾತ್ರೆ ತೆಗೆದುಕೊಳ್ಳಬಾರದು. ಒಂದು ವೇಳೆ ಮಾತ್ರೆ ತೆಗೆದುಕೊಳ್ಳುವುದಾದರೆ ಕಡಿಮೆ ಡೊಸೆಜ್ ಇರುವ ಮಾತ್ರೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ಜೀವನಶೈಲಿಯಲ್ಲಿ ಡಯೇಟ್ ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಸ್ವಾಭಾವಿಕವಾಗಿ ಬಿಪಿಯನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ.
ಬಿಪಿಯಿಂದ ಸ್ಟ್ರೋಕ್ ಆಗುವುದೇ?
ಬಿಪಿ ಹೆಚ್ಚಾದರೆ ನಿರಂತರವಾಗಿ ತಪಾಸಣೆಗೆ ಒಳಪಡುವ ಮೂಲಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರಬೇಕು. ಬಿಪಿ ಜಾಸ್ತಿಯಾದರೆ ಸ್ಟ್ರೋಕ್ ಆಗುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ, ಬಿಪಿ ಹಾಗೂ ಸ್ಟ್ರೋಕ್‌ಗೆ ಇರುವ ಸಂಬಂಧವನ್ನು ತಿಳಿಯೋಣ.
ಹೃದಯದಿಂದ ಹೊರಟ ರಕ್ತ ರಕ್ತನಾಳಗಳ ಮೂಲಕ ದೇಹದ ವಿವಿಧ ಭಾಗಗಳಿಗೆ ಸಂಚಾರಿಸುತ್ತದೆ. ಹೃದಯದಿಂದ ಹೊರಟ ರಕ್ತದ ಒತ್ತಡ 120 ರಷ್ಟಿರುತ್ತದೆ. ಇದೇ ಪ್ರಮಾಣದಲ್ಲಿ ರಕ್ತ ದೇಹದ ವಿವಿಧ ಅಂಗಾಂಗಗಳಿಗೆ ಸಂಚಾರಿಸುತ್ತಿರುತ್ತದೆ. ಹೀಗೆ ಹೃದಯದಿಂದ ಹೊರಟ ರಕ್ತ ಮಿದುಳನ್ನು ತಲುಪುವಷ್ಟರಲ್ಲಿ ರಕ್ತದ ಒತ್ತಡದ ಪ್ರಮಾಣ 15 ರಷ್ಟಾಗಿರುತ್ತದೆ.
ಹೃದಯದಿಂದ ರಕ್ತ ಸಂಚಾರಿಸುವುದನ್ನು ಅಲ್ಟ್ರೀಸ್ ಎಂದು ಕರೆಯಲಾಗುತ್ತದೆ. ಅದೇ ರೀತಿ ಮಿದುಳಿಗೆ ರಕ್ತ ತಲುಪುವ ವಿಧಾನವನ್ನು ಕ್ಯಾಪಿಲರೀಸ್ ಎಂದು ಹೇಳಲಾಗುತ್ತದೆ.
ಅಲ್ಟ್ರೀಸ್‌ನಲ್ಲಿ ರಕ್ತದ ಒತ್ತಡ ಹೆಚ್ಚಾದಾಗ ಕ್ರಮೇಣ ಕ್ಯಾಪಿಲರೀಸ್‌ನಲ್ಲಿಯೂ ರಕ್ತದ ಒತ್ತಡ ದ್ವಿಗುಣವಾಗುತ್ತದೆ. ಅಂದರೆ ವಿಜ್ಞಾನದ ಪ್ರಕಾರ ಅಲ್ಟ್ರೀಸ್‌ನಲ್ಲಿನ ರಕ್ತದ ಒತ್ತಡ ದ್ವಿಗುಣವಾದಾಗ 240 ರಷ್ಟಿರುತ್ತದೆ. ಇದೇ ವೇಳೆ ಕ್ಯಾಪಿಲರೀಸ್‌ನಲ್ಲಿಯೂ ರಕ್ತದ ಒತ್ತಡ 30 ರಷ್ಟಿರುತ್ತದೆ. ಅತಿಹೆಚ್ಚು ರಕ್ತದ ಒತ್ತಡ ಉಂಟಾಗಿ ರಕ್ತನಾಳಗಳಲ್ಲಿ ತೀವ್ರ ರಕ್ತಸ್ರಾವ ಉಂಟಾಗುತ್ತದೆ. ಇದರಿಂದಾಗಿ ಸ್ಟ್ರೋಕ್ ಆಗುವ ಸಾಧ್ಯತೆ ಇರುತ್ತದೆ.
ರಕ್ತದ ಒತ್ತಡದ ಪ್ರಮಾಣ 120, 130, 140 ರಷ್ಟಿದರೆ ಸ್ಟ್ರೋಕ್ ಆಗುವ ಸಾಧ್ಯತೆಗಳು ಕಡಿಮೆ. ಆದರೆ, ರಕ್ತದ ಒತ್ತಡದ ಪ್ರಮಾಣ 140ರಿಂದ 240ಕ್ಕಿಂತಲೂ ಹೆಚ್ಚಿದರೆ ಮಾತ್ರ ಸ್ಟ್ರೋಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಕೇವಲ ಎರಡು –ಮೂರು ದಿನದಲ್ಲಿ ರಕ್ತದ ಒತ್ತಡ ಏಕಾಏಕಿ ಏರಿಕೆಯಾದರೂ ಅಥವಾ ಕಡಿಮೆಯಾದರೂ ಸ್ಟ್ರೋಕ್ ಆಗುವ ಸಾಧ್ಯತೆಗಳಿರುತ್ತವೆ. ಮಿದುಳಿಗೆ ರಕ್ತ ಸಂಚಾರ ಕಡಿಮೆಯಾದಾಗ ಶೇ 90ರಷ್ಟು ಸ್ಟ್ರೋಕ್ ಆಗುವ ಸಾಧ್ಯತೆ ಇದೆ. ಉಳಿದಂತೆ ಬಿಪಿ ಹೆಚ್ಚಾಗಿ ರಕ್ತನಾಳಗಳಲ್ಲಿ ರಕ್ತಸ್ರಾವ ಉಂಟಾದಾಗ ಶೇ 10ರಷ್ಟು ಸ್ಟ್ರೋಕ್ ಆಗುವ ಸಾಧ್ಯತೆ ಇದೆ.
ಇತ್ತೀಚಿನ ದಿನಗಳಲ್ಲಿ ಬಿಪಿ ಹೆಚ್ಚಾದರೂ ಅಥವಾ ಕಡಿಮೆಯಾದರೂ Blood Thinners ಬಳಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಆದರೆ, ಶೇ 90 ರಷ್ಟು ರೋಗಿಗಳು Blood Thinners ಹೆಚ್ಚಾಗಿ ಬಳಸುವುದರಿಂದ ಸ್ಟ್ರೋಕ್‌ಗೆ ಒಳಗಾಗುತ್ತಿದ್ದಾರೆ. ರಕ್ತದ ಒತ್ತಡ ಹಾಗೂ ಬಿಪಿ ಹೆಚ್ಚಾದಾಗ ಜನರು ಆತಂಕಕ್ಕೆ ಒಳಗಾಗಿ ಮಾತ್ರೆ, ಔಷಧಿಗಳನ್ನು ಪಡೆಯುವ ಬದಲು ಪೌಷ್ಠಿಕ ಆಹಾರ ಸೇವಿಸುವ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸೂಕ್ತ.
ಈ ವಸ್ತುವಿನ ಬಗ್ಗೆ ಎಚ್ಚರ… ಎಚ್ಚರ, ಯಾಮಾರಿದರೆ ಬರುತ್ತೆ ಬಿಪಿ!
ಕೆಲವು ವರ್ಷಗಳ ಹಿಂದೆ ಹಿರಿಯರು ಬಿಪಿ ತಪಾಸಣೆ ಮಾಡಿಸಬೇಕು ಎಂದರೇ, ತಲೆ ನೋವು ಸೇರಿದಂತೆ ಇತರೆ ಲಕ್ಷಣಗಳ ಕಂಡುಬಂದಾಗ ಮಾತ್ರ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಸುಸ್ತು, ಮೈ –ಕೈ ನೋವು, ನೆಗಡಿ ಕಂಡು ಬಂದರೆ ಸಾಕು ಬಿಪಿಗೆ ಸಂಬಂಧಿಸಿದ ಲಕ್ಷಣಗಳು ಎಂದು ಭಾವಿಸಿ ಆಸ್ಪತ್ರೆಗೆ ತೆರಳದೆ ಡಿಜಿಟಲ್ ಯಂತ್ರದ (ಡಿಜಿಟಲ್ ಬಿಪಿ ಆಪರೇಟರ್ ಅಥವಾ ಬಿಪಿ ಮಾನಿಟರ್) ಮೂಲಕ ಮನೆಯಲ್ಲೇ ಬಿಪಿ ಚೆಕ್ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಎದೆ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಕೋವಿಡ್ ಲಸಿಕೆ ಪಡೆದ ನಂತರ ಎದೆ ನೋವು ಕಾಣಿಸಿಕೊಳ್ಳುವ ಪ್ರಕರಣ ಸಂಖ್ಯೆ ಹೆಚ್ಚಿದೆ.
ಒಂದು ವಿಚಾರ ತಿಳಿದುಕೊಳ್ಳಬೇಕಿದೆ. ಎದೆ ನೋವಿಗೂ ಬಿಪಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆದರೆ, ಡಿಜಿಟಲ್ ಬಿಪಿ ಆಪರೇಟರ್ ಎಂಬುದು ಒಂದು ಬಿಸಿನೆಸ್ ಉದ್ದೇಶದಿಂದಲೇ ಪರಿಚಯಿಸಲ್ಪಟ್ಟ ಯಂತ್ರವಾಗಿದೆ. ಡಿಜಿಟಲ್ ಬಿಪಿ ಆಪರೇಟರ್ ಯಂತ್ರದ ಬಗ್ಗೆ ಜಾಹೀರಾತಿನ ಮೂಲಕ ಜನರನ್ನು ಯಾಮಾರಿಸುವ ಕೆಲಸ ಜೋರಾಗಿ ನಡೆಯುತ್ತಿದೆ. ಇಂತಹ ಯಂತ್ರಗಳನ್ನು ಖರೀದಿಸುವಂತೆ ಖುದ್ದು ವೈದ್ಯರೇ ಪ್ರಮೋಟ್ ಮಾಡುವ ಕೆಲಸ ಮಾಡುತ್ತಿದ್ದಾರೆ.
ಡಿಜಿಟಲ್ ಬಿಪಿ ಆಪರೇಟರ್ ಯಂತ್ರ ಬಳಸುವುದರಿಂದ ತಪ್ಪೇನಿದೆ ಎಂಬುದು ಸಾಮಾನ್ಯರ ಪ್ರಶ್ನೆಯಾಗಿದೆ. ಇದಕ್ಕೆ ಉತ್ತರ ಹೀಗೆ ವಿವರಿಸಬಹುದು. ಡಿಜಿಟಲ್ ಬಿಪಿ ಆಪರೇಟರ್ ಯಂತ್ರಗಳಲ್ಲಿ ನಿಖರತೆ (Accuracy) ಇರುವುದಿಲ್ಲ ಮತ್ತು ತಾಂತ್ರಿಕ ದೋಷ (Technical Error) ಕಂಡು ಬಂದಿದೆ. ಬಿಪಿ ಎಷ್ಟಿದೆ ಚೆಕ್ ಮಾಡಿಕೊಂಡಾಗ ರೀಡಿಂಗ್‌ನಲ್ಲಿ ಪ್ರತಿ ನಿಮಿಷವೂ ವ್ಯತ್ಯಾಸವನ್ನು ತೋರಿಸುತ್ತವೆ.
ಒಂದು ವೇಳೆ ನಿಮಗೆ ಬಿಪಿ ಇರುವುದಿಲ್ಲ ಎಂದುಕೊಳ್ಳಿ. ಆದರೆ, ನಿಮ್ಮ ಮನೆಯಲ್ಲಿ ಡಿಜಿಟಲ್ ಬಿಪಿ ಆಪರೇಟರ್ ಯಂತ್ರ ಇದೆ. ಒಮ್ಮೆ ಬಿಪಿ ಚೆಕ್ ಮಾಡಿಕೊಂಡಾಗ ರೀಡಿಂಗ್ ಜಾಸ್ತಿ ತೋರಿಸುತ್ತಿದೆ. ದಿನೇ ದಿನೇ ಬಿಪಿ ರೀಡಿಂಗ್‌ನಲ್ಲಿ ವ್ಯತ್ಯಾಸ ತೋರಿಸುವುದರಿಂದ ನಿಮಗೆ ಬಿಪಿ ಇದೆ ಎಂಬ ಅನುಮಾನವು ಮೂಡುತ್ತದೆ. ಜೊತೆಗೆ ಇದರಿಂದಾಗಿ ಮಾನಸಿಕ ಒತ್ತಡ, ರಕ್ತದೊತ್ತಡವೂ ಹೆಚ್ಚಾಗುತ್ತದೆ. ಈ ಒತ್ತಡವೇ ನಿಜವಾದ ಬಿಪಿಗೆ ಕಾರಣವಾಗಬಹುದು. ಮನೆಯಲ್ಲಿ ಯಂತ್ರವಿದೆ ಎಂಬ ಕಾರಣಕ್ಕೆ ಪದೇ ಪದೇ ಬಿಪಿ ಚೆಕ್ ಮಾಡಿಕೊಳ್ಳಬೇಡಿ. ನಿಮಗೆ ಬಿಪಿ ಇದೆ, ಬಿಪಿ ಬರುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾದರೆ ಆಸ್ಪತ್ರೆಗೆ ತೆರಳಿ ತಜ್ಞ ವೈದ್ಯರನ್ನು ಸಂಪರ್ಕಿಸಿ ಸ್ಪಿಗ್ಮೋಮಾನೋಮೀಟರ್‌ನಲ್ಲಿ (Sphygmomanometer) ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.
ನಿಮ್ಮ ಬಿಪಿ ಎಷ್ಟಿರಬೇಕು? ಇಲ್ಲಿದೆ ಮಾಹಿತಿ…
ನಾರ್ಮಲ್ ರಕ್ತದೊತ್ತಡ (ಬಿಪಿ) ಎಂದರೇ ಎಷ್ಟಿರಬೇಕು? ಅಧಿಕ ರಕ್ತದೊತ್ತಡ ಎಂದರೇ ಎಷ್ಟಿರಬೇಕು? ಎಂಬುದರ ಬಗ್ಗೆ ಜನರು ತಿಳಿದುಕೊಳ್ಳಬೇಕಿದೆ. ಹೌದು, ಇತ್ತೀಚಿನ ದಿನಗಳಲ್ಲಿ ನಿಮಗೆ ನಾರ್ಮಲ್‌ಗಿಂತಲ್ಲೂ ರಕ್ತದೊತ್ತಡ ಜಾಸ್ತಿ ಇದೆ ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ನಾರ್ಮಲ್ ರಕ್ತದೊತ್ತಡ ಎಂದರೇ 120 / 80 ಇಷ್ಟೇ ಇರಬೇಕು ಎಂದು ಜನರ ತಲೆಗೆ ತುಂಬುವ ಕೆಲಸವನ್ನು ಕೆಲವು ವೈದ್ಯರು ಮಾಡುತ್ತಿದ್ದಾರೆ.
ನಮ್ಮ ಹೃದಯ ಕಾಂಟ್ರಾಕ್ಟ್ ಆದಾಗ ಹೃದಯದಲ್ಲಿರುವ ರಕ್ತ ರಕ್ತನಾಳ ಮೂಲಕ ಹೊರ ಭಾಗಗಳಿಗೆ ಸಂಚರಿಸುತ್ತದೆ. ಹೀಗೆ ರಕ್ತನಾಳಗಳ ಮೂಲಕ ರಕ್ತ ವೇಗವಾಗಿ ಸಂಚರಿಸುವ ವಿಧಾನವನ್ನು ರಕ್ತದೊತ್ತಡ ಎಂದು ಕರೆಯಲಾಗುತ್ತದೆ.
ಹೃದಯ ಕಾಂಟ್ರಾಕ್ಟ್ ಆದಾಗ ರಕ್ತನಾಳಗಳ ಮೂಲಕ ಸಂಚರಿಸುವ ರಕ್ತದ ವೇಗ (Systolic BP And High Diastolic BP) ಮತ್ತು ಹೃದಯ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾಗ ಸಂಚರಿಸುವ ರಕ್ತದ ವೇಗವನ್ನು ಹೋಲಿಕೆ ಮಾಡಿ ರಕ್ತದೊತ್ತಡ ಎಷ್ಟಿದೆ ಎಂದು ಅಂದಾಜು ಮಾಡಬಹುದು. ನಾರ್ಮಲ್ ರಕ್ತದೊತ್ತಡ 120 /80 ಇಷ್ಟಿರಬೇಕು ಎಂಬುದನ್ನು ಜನ ತಲೆಯಿಂದ ತೆಗೆದುಹಾಕು.
ರಕ್ತದೊತ್ತಡಕ್ಕೆ ಏನು ಕಾರಣ?
ರಕ್ತದೊತ್ತಡ ಎಂಬುದು ಹೃದಯ ಕಾಂಟ್ರಾಕ್ಟ್ ಆಗುವುದು, ರಕ್ತನಾಳಗಳಲ್ಲಿನ ರಕ್ತದ ಒತ್ತಡ, ರಕ್ತನಾಳ ಒರಟಾಗಿದೆಯೇ ಅಥವಾ ಮೃದುವಾಗಿದೆಯೇ, ವಯಸ್ಸಿನ ಆಧಾರದ ಮೇಲೆ ಹೃದಯ ಬಡಿತದ ವ್ಯತ್ಯಾಸ ಹಾಗೂ ರಕ್ತನಾಳದ ಒಳಪದರದಲ್ಲಿ ಆಗುವ ವ್ಯತ್ಯಾಸವನ್ನು ಅವಲಂಬಿಸಿರುತ್ತದೆ.
ಮಕ್ಕಳಲ್ಲಿ ರಕ್ತದೊತ್ತಡ (120 /80) ಕಡಿಮೆ ಇರುತ್ತದೆ. ಆದರೆ, 25 ವರ್ಷದ ನಂತರ ಹೃದಯ ಬಡಿತದ ಏರುಪೇರು ಹಾಗೂ ಮೃದುವಾಗಿದ್ದ ರಕ್ತನಾಳಗಳು ಒರಟುತನ ಕಂಡುಬರುತ್ತದೆ. ಈ ವಯೋಮಾನದವರಲ್ಲಿ ರಕ್ತದೊತ್ತಡದ ಪ್ರಮಾಣ ಕ್ರಮೇಣ 120ರಿಂದ 130, 140, 150 ರವರೆಗೆ ಬದಲಾವಣೆ ಆಗುತ್ತಿರುತ್ತದೆ. 30ರಿಂದ 40 ವರ್ಷದವರಲ್ಲಿ 150/90 ರಷ್ಟಿದರೇ ಅದು ನಾರ್ಮಲ್ ರಕ್ತದೊತ್ತಡ ಎಂದರ್ಥ. 160/ 100 ರಷ್ಟಿದರೇ ರಕ್ತದೊತ್ತಡದ ಪ್ರಮಾಣ ಹೆಚ್ಚಿದೆ ಎಂದರ್ಥ.
ನೆಗಡಿ, ಕೆಮ್ಮು, ಜ್ವರ ಮೈ–ಕೈ ನೋವು ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ತೆರಳಿದ್ದ ವೇಳೆ ರಕ್ತದೊತ್ತಡ ತಪಾಸಣೆ ಮಾಡಿಸಿದಾಗ 160 /100 ರಷ್ಟು ಬರುತ್ತದೆ. ಅಂತಹ ಸಂದರ್ಭದಲ್ಲಿ ರಕ್ತದೊತ್ತಡ ಜಾಸ್ತಿ ಆಗಿದೆ ಎಂದು ಜನರು ಆತಂಕಕ್ಕೆ ಒಳಗಾಗಬಾರದು. ಜತೆಗೆ, ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುವ ಅಗತ್ಯತೆ ಇರುವುದಿಲ್ಲ. ಒತ್ತಡ ಕಡಿಮೆ ಮಾಡಿಕೊಳ್ಳಿ ಎಲ್ಲವೂ ಸರಿಹೋಗುತ್ತದೆ.
ಕೆಲವರಿಗೆ ಆಸ್ಪತ್ರೆಗಳಲ್ಲಿ ವೈದ್ಯರನ್ನು ನೋಡಿದ ಕೂಡಲೇ ಆತಂಕಕ್ಕೆ ಒಳಗಾಗುತ್ತಾರೆ. ಅಂತಹ ಸಂದರ್ಭದಲ್ಲಿ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆಗ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನಿಸಿ.
ಜೀವನಶೈಲಿಯ ಬದಲಾವಣೆಯೊಂದಿಗೆ ರಕ್ತದೊತ್ತಡ ಕಡಿಮೆ ಮಾಡಿಕೊಳ್ಳಬೇಕು. ಹೊರತುಪಡಿಸಿ ಹೆಚ್ಚು ಡೊಸೆಜ್ ಮಾತ್ರೆಗಳು, ಔಷಧಿಗಳನ್ನು ತೆಗೆದುಕೊಂಡು ಏಕಾಏಕಿ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮುಂದಾಗಬಾರದು. ಹಾಗೇ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಎಚ್ಚರವಹಿಸಿ.
ರಕ್ತದೊತ್ತಡ (ಬಿಪಿ) ಹೆಚ್ಚಾದರೆ ಲಕ್ಷಣಗಳೇನು?
ಸಾಮಾನ್ಯವಾಗಿ ಕಾಯಿಲೆ ಇದೆ ಎಂಬುದು ನಿಮಗೆ ಯಾವಾಗ ತಿಳಿಯುತ್ತದೆ. ಆಥವಾ ಆಸ್ಪತ್ರೆಗೆ ಯಾವಾಗ ಹೋಗುತ್ತೀರಾ? ಯಾವುದಾದರೂ ಕಾಯಿಲೆ ಸಂಬಂಧಿಸಿ ಲಕ್ಷಣಗಳು ಕಂಡು ಬಂದಾಗ ನೀವು ಆಸ್ಪತ್ರೆಗೆ ಹೋಗುತ್ತೀರಿ. ಉದಾಹರಣೆ ಜ್ವರ ಬಂದಿರಬೇಕು ಅಥವಾ ರಾತ್ರಿ ವೇಳೆ ಹೆಚ್ಚು ಮೂತ್ರ ಸಮಸ್ಯೆ, ತುಂಬಾ ಬಾಯಾರಿಕೆ ಕಂಡು ಬಂದಾಗ ಇದು ಡಯಾಬಿಟಿಸ್ (ಸಕ್ಕರೆ ಕಾಯಿಲೆ) ಇರಬಹುದೆಂದು ಭಾವಿಸಿ ಆಸ್ಪತ್ರೆಗೆ ಹೋಗುತ್ತೀರಿ.
ಇದರ ಅರ್ಥ ಪ್ರತಿಯೊಂದು ಕಾಯಿಲೆಗೂ ಅದರದೇ ಆದ ಕೆಲವು ಲಕ್ಷಣಗಳಿರುತ್ತವೆ. ದೇಹಕ್ಕೆ ಯಾವಾಗ ಅಸಹಜ (Abnormal) ಅನಿಸಿದರೆ ಆಗ ಲಕ್ಷಣದ ರೂಪದಲ್ಲಿ ತಿಳಿಯುತ್ತದೆ. ಆದೇ ರೀತಿ ನಿಮ್ಮ ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗಿದೆ ಎಂದರೇ ನಿಮ್ಮ ದೇಹದಲ್ಲಿ ಲಕ್ಷಣಗಳು ಕಂಡು ಬರುತ್ತವೆ.
ರಕ್ತದೊತ್ತಡದ ಲಕ್ಷಣಗಳೆಂದರೆ ಶೇ 50ರಷ್ಟು ರೋಗಿಗಳಲ್ಲಿ ಯಾವುದೇ ಲಕ್ಷಣಗಳಿರುವುದಿಲ್ಲ. ಆದರೆ, ಮಾತ್ರೆಗಳನ್ನು ಕೊಡಲೇಬೇಕೆಂಬ ಉದ್ದೇಶದಿಂದ ಕೆಲವು ವೈದ್ಯರು ‘ಎ’ ವರ್ಗವೆಂದು ವಿಂಗಡಿಸಿ ಚಿಕಿತ್ಸೆ ನೀಡುತ್ತಾರೆ. ರಕ್ತದೊತ್ತಡ ಹೆಚ್ಚಾಗಿದ್ದು, ದೇಹದಲ್ಲಿ ಯಾವುದೇ ಲಕ್ಷಣಗಳು ಕಾಣಿಸಿಲ್ಲ ಎಂದರೇ ದೇಹಕ್ಕೆ ಅದು ಸಹಜವಾಗಿದೆ (Normal) ಎಂದರ್ಥ. ರಕ್ತದೊತ್ತಡದೊಂದಿಗೆ ನಿಮ್ಮ ದೇಹ ಹೊಂದಿಕೊಂಡಿರುತ್ತದೆ. ರಕ್ತದೊತ್ತಡ ಹೆಚ್ಚಾದರೇ ಆಗ ದೇಹದಲ್ಲಿ ಲಕ್ಷಣಗಳು ಕಾಣಿಸುತ್ತವೆ. ಉದಾಹರಣೆಗೆ ನಿಮ್ಮ ದೇಹದಲ್ಲಿ ರಕ್ತದೊತ್ತಡದ ಪ್ರಮಾಣ 160 /100 ರಷ್ಟಿದರೇ ಯಾವುದೇ ಲಕ್ಷಣ ಕಾಣಿಸುವುದಿಲ್ಲ. ಕ್ರಮೇಣವಾಗಿ ರಕ್ತದೊತ್ತಡದ ಪ್ರಮಾಣ 175 /110 ಅಥವಾ 180/ 120 ರಷ್ಟಾದರೇ ಒಂದು ಹಂತದಲ್ಲಿ ನಿಮ್ಮ ದೇಹಕ್ಕೆ ಅಸಜ (Abnormal) ಎನಿಸಿದಾಗ ಲಕ್ಷಣಗಳು ಕಂಡು ಬರುತ್ತವೆ. ಅಂತಹ ಸಂದರ್ಭದಲ್ಲಿ ಆತಂಕಕ್ಕೆ ಒಳಗಾಗಿ ಕೂಡಲೇ ಮಾತ್ರೆ, ಔಷಧಿ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ.
ಒಂದು ವೇಳೆ ರಕ್ತದೊತ್ತಡದ ಪ್ರಮಾಣ 170/ 110 ಇದೆ ಎಂದುಕೊಳ್ಳಿ. ಕೂಡಲೇ ಮಾತ್ರೆ, ಔಷಧಿ ತೆಗೆದುಕೊಂಡಾಗ ರಕ್ತದೊತ್ತಡದ ಪ್ರಮಾಣ ಕಡಿಮೆ ಆಗಬಹುದು. ಆದರೆ, ಔಷಧಿ ತೆಗೆದುಕೊಂಡ ಬಳಿಕ ಕೆಲವರ ದೇಹದಲ್ಲಿ ತಲೆ ಸುತ್ತು ಸೇರಿದಂತೆ ಬೇರೆ ಸಮಸ್ಯೆಗಳು ಕಾಣಿಸಿಕೊಂಡ . ಔಷಧಿಗಳನ್ನು ಬಳಸದೆ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಸಹಜವಾಗಿಯೇ ರಕ್ತದೊತ್ತಡ ಕಡಿಮೆ ಮಾಡಿಕೊಳ್ಳುವುದು ಉತ್ತಮ.
ರಕ್ತದೊತ್ತಡ ಹೆಚ್ಚಾದಾಗ ಕಂಡು ಬರುವ ಲಕ್ಷಣಗಳು ಇಂತಿವೆ: ತಲೆನೋವು, ಮೂಗಿನಲ್ಲಿ ರಕ್ತಸ್ರಾವ, ವಾಕರಿಕೆ ಬರುವುದು ಮತ್ತು ವಾಂತಿ, ಉಸಿರಾಟದಲ್ಲಿ ವ್ಯತ್ಯಾಸ, ಹೃದಯ ಬಡಿತದಲ್ಲಿ ವ್ಯತ್ಯಾಸ, ಕಣ್ಣು ಮಂಜಾಗುವಿಕೆ, ತುಂಬ ಬೆವರು ಬರುವಿಕೆ, ಗೊಂದಲಕ್ಕೆ ಒಳಗಾಗುವಿಕೆ.
ರಕ್ತದೊತ್ತಡ ಹೆಚ್ಚಾಗುವುದಕ್ಕೂ ಎದೆ ನೋವು ಹಾಗೂ ತಲೆ ಸುತ್ತು ಕಾಣಿಸಿಕೊಳ್ಳುವುದಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ರಕ್ತದೊತ್ತಡದ ಔಷಧಿಗಳನ್ನು ಬಳಸಬಹುದೇ ಹೊರೆತು ಪ್ರತಿನಿತ್ಯ ರಕ್ತದೊತ್ತಡದ ಮಾತ್ರೆ, ಔಷಧಿಗಳನ್ನು ಬಳಸುವುದು ಆರೋಗ್ಯಕ್ಕೆ ಮಾರಕ.
ರಕ್ತದಲ್ಲಿ ಗ್ಲುಕೋಸ್ ಅಂಶ ಎಷ್ಟಿರಬೇಕು?
ರಕ್ತದಲ್ಲಿ ಗ್ಲುಕೋಸ್ ಅಂಶ ಎಷ್ಟಿರಬೇಕು? ಕಡಿಮೆ ಎಂದರೆ ಎಷ್ಟು? ಜಾಸ್ತಿ ಎಂದರೆ ಎಷ್ಟು? ಎಂಬುದರ ಬಗ್ಗೆ ಜನರಲ್ಲಿ ತಪ್ಪು ತಿಳುವಳಿಕೆ ಇದೆ. ರಕ್ತದಲ್ಲಿ ಗ್ಲುಕೋಸ್ ಅಂಶ ಇಂತಿಷ್ಟ ಇರಬೇಕು ಎಂಬುದರ ಬಗ್ಗೆ ಯಾವುದೇ ಮಾನದಂಡಗಳಿಲ್ಲ. ಗ್ಲುಕೋಸ್ ಪ್ರಮಾಣ ಎಂಬುದು ಪ್ರತಿಯೊಬ್ಬರ ಅವಶ್ಯಕತೆಗೆ ತಕ್ಕಂತೆ ಇರುತ್ತದೆ. ಕೆಲವೊಬ್ಬರಿಗೆ ಕಡಿಮೆ ಗ್ಲುಕೋಸ್ ಅವಶ್ಯಕತೆ ಇರುತ್ತದೆ. ಇನ್ನು ಕೆಲವರಿಗೆ ಹೆಚ್ಚಿನ ಗ್ಲುಕೋಸ್ ಅವಶ್ಯಕತೆ ಇರುತ್ತದೆ. ಅವಶ್ಯಕತೆಗಿಂತ ಕಡಿಮೆ ಗ್ಲುಕೋಸ್ ತೆಗೆದುಕೊಳ್ಳುವುದೆಂದರೆ ಅದನ್ನು ಹೈಪೋಗ್ಲೈಸಿಮಿಯಾ (ಕಡಿಮೆ ಶುಗರ್ ಲೆವೆಲ್) ಎಂದು ಕರೆಯಲಾಗುತ್ತದೆ. ಅವಶ್ಯಕತೆಗಿಂತ ಹೆಚ್ಚು ಗ್ಲುಕೋಸ್ ತೆಗೆದುಕೊಳ್ಳುವುದನ್ನು ಡಯಾಬಿಟಿಸ್ (ಸಕ್ಕರೆ ಕಾಯಿಲೆ) ಎಂದು ಕರೆಯಲಾಗುತ್ತದೆ
ದೇಹದಲ್ಲಿ ಗ್ಲುಕೋಸ್ ಪ್ರಮಾಣ ಎಷ್ಟಿದೆ ಎಂಬುದು ಯಾವಾಗ ತಿಳಿಯುತ್ತದೆ ಎಂದರೆ, ನಮ್ಮ ದೇಹದಲ್ಲಿ ಗ್ಲುಕೋಸ್ ಪ್ರಮಾಣ ಕಡಿಮೆಯಾದರೆ ಅಥವಾ ಹೆಚ್ಚಾದರೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಒಂದು ವೇಳೆ ನಿಮ್ಮ ದೇಹದಲ್ಲಿ ಯಾವುದೇ ಲಕ್ಷಣಗಳು ಕಾಣಿಸದಿದ್ದರೆ ಅದು ಗ್ಲುಕೋಸ್ ನಾರ್ಮಲ್ ಲೆವೆಲ್ ಎಂದರ್ಥ. ಇಂತಹ ಸಂದರ್ಭದಲ್ಲಿ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೆ ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಔಷಧ ತಯಾರಕ ಸಂಸ್ಥೆಗಳು ದೇಹದಲ್ಲಿನ ಗ್ಲುಕೋಸ್ ಅಂಶದ ಪ್ರಮಾಣವನ್ನು ಆಧರಿಸಿ ಇಂತಿಷ್ಟೇ ಇರಬೇಕು ಎಂದು ನಿರ್ದಿಷ್ಟ ಮಾನದಂಡಗಳನ್ನು ಸಿದ್ಧಪಡಿಸುವೆ. ಉದಾಹರಣೆಗೆ ಊಟ ಮಾಡುವುದಕ್ಕೂ ಮುನ್ನ ಅಥವಾ ಊಟ ಮಾಡಿದ ಬಳಿಕ ಗ್ಲುಕೋಸ್ ಪ್ರಮಾಣ ಇಷ್ಟೇ ಇರಬೇಕು ಎಂದು ನಿಗದಿ ಮಾಡುತ್ತವೆ.
ಖಾಲಿ ಹೊಟ್ಟೆಯಲ್ಲಿ ಇದ್ದಾಗ 70 ರಿಂದ 110ರ ವರೆಗೆ ಗ್ಲುಕೋಸ್ ಅಂಶ ಇರಬೇಕು ಅಥವಾ ಊಟ ಮಾಡಿದ ಬಳಿಕ 70 ರಿಂದ 140 ರಷ್ಟು ಇರಬೇಕು, ಮೂರನೇ ಹಂತ hba1c 5.5 ರಷ್ಟು ಇರಬೇಕು ಎಂದು ಹೇಳಲಾಗುತ್ತದೆ ಇದು ತಪ್ಪು ಮಾಹಿತಿ.
ಹಾಗಾದರೆ ಯಾವುದು ಸರಿಯಾದ ಮಾನದಂಡ ಎಂದು ನಿಮಗೆ ಅನುಮಾನ ಮೂಡುವುದು ಸಹಜ. ಆದರೆ, ಯಾವುದು ಉತ್ತಮ ಮಾನದಂಡವೆಂದರೆ ಊಟ ಮಾಡಿದ ಎರಡು ಗಂಟೆಯ ಬಳಿಕ ಗ್ಲುಕೋಸ್ ಅಂಶ ಎಷ್ಟಿದೆ ಎಂದು ತಪಾಸಣೆ ನಡೆಸುವುದು ಸೂಕ್ತ. ಗ್ಲುಕೋಸ್ ಮಟ್ಟ 250 ರವರೆಗೆ ರಾಂಡಮ್ ಲಕ್ಷಣಗಳು ಇರುವುದಿಲ್ಲ. 250 ಕ್ಕಿಂತ ಜಾಸ್ತಿ ಇದ್ದರೆ ಮಾತ್ರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಹಂತದವರೆಗೆ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಜೊತೆಗೆ ಆತಂಕಕ್ಕೆ ಒಳಗಾಗಿ ವೈದ್ಯರನ್ನು ಭೇಟಿಯಾಗಬೇಡಿ.
ರಕ್ತದಲ್ಲಿ ಗ್ಲುಕೋಸ್ ಅಂಶ ಕಡಿಮೆ ಮಾಡಿಕೊಳ್ಳುವ ವಿಧಾನ: ಆಹಾರ ಕ್ರಮದ ಬದಲಾವಣೆ, ವ್ಯಾಯಾಮ ಮಾಡುವುದು, ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು
ಆಹಾರ ಕ್ರಮ ಹೇಗಿರಬೇಕು ಎಂದರೆ ದಿನಕ್ಕೆ ಎರಡು ಬಾರಿ ಊಟ ಮಾಡಬೇಕು. ಮಾಡುವಂತಹ ಊಟದಲ್ಲಿ ಕಾರ್ಬೋಹೈಡ್ರೇಟ್ಸ್ ಪ್ರಮಾಣ ಕಡಿಮೆ ಇರಬೇಕು. ವಿಟಮಿನ್ಸ್ ಮತ್ತು ಮಿನರಲ್ಸ್ ಜಾಸ್ತಿ ಇರಬೇಕು. ಅಂದರೆ ಸಾಮಾನ್ಯ ಆಹಾರದ ಜೊತೆಗೆ ತರಕಾರಿ, ಸೊಪ್ಪುಗಳನ್ನು ಜಾಸ್ತಿ ಸೇವಿಸಬೇಕು.
ವ್ಯಾಯಾಮದ ಕ್ರಮ ಹೇಗಿರಬೇಕು ಎಂದರೆ ಬೆಳಗ್ಗೆಯಿಂದ ರಾತ್ರಿಯವರೆಗೆ ಓಡಾಡಿಕೊಂಡು ಕೆಲಸ ಮಾಡುವಂತಿರಬೇಕು. 40 ನಿಮಿಷ ಅಥವಾ ಒಂದು ಗಂಟೆಗೂ ಹೆಚ್ಚು ಕಾಲ ಕುಳಿತುಕೊಂಡು ಕೆಲಸ ಮಾಡುವುದರಿಂದ ಡಯಾಬಿಟಿಸ್ (ಸಕ್ಕರೆ ಕಾಯಿಲೆ) ಸೇರಿದಂತೆ ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಓಡಾಡಿಕೊಂಡು ಕೆಲಸ ಮಾಡುವುದು ಸೂಕ್ತ.
ರಕ್ತದೊತ್ತಡದಿಂದ ಕೋಪ ಹೆಚ್ಚಾಗುತ್ತದೆಯೇ?
ರಕ್ತದೊತ್ತಡ ಜಾಸ್ತಿ ಇದ್ದರೆ ಕೋಪ ಬರುತ್ತದೆ ಎಂಬ ಗ್ರಹಿಕೆ ಎಲ್ಲರಲ್ಲಿದೆ. ಆದರೆ, ಸತ್ಯವೇ ಏನೆಂದರೆ ರಕ್ತದೊತ್ತಡದಿಂದ ಯಾವುದೇ ಕಾರಣಕ್ಕೂ ಕೋಪ ಹೆಚ್ಚಾಗುವುದಿಲ್ಲ. ತುಂಬಾ ದಿನಗಳಿಂದ ಒಬ್ಬ ವ್ಯಕ್ತಿ ಕೋಪ ಮಾಡಿಕೊಳ್ಳುತ್ತಿದ್ದರೆ ಅಥವಾ ಕೋಪವನ್ನು ನಿಯಂತ್ರಿಸಲು ಸಾಧ್ಯವಿಲ್ಲದಿದ್ದರೆ ಅಂತವರಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ.
ಕೋಪದಿಂದ ರಕ್ತದೊತ್ತಡ ಹೇಗೆ ಹೆಚ್ಚಾಗುತ್ತದೆ ಎಂಬುದನ್ನು ನೋಡುವುದಾದರೆ ಒಂದು ವೇಳೆ ನೀವು ಕೋಪ ಮಾಡಿಕೊಂಡಿದ್ದೀರಿ ಎಂದುಕೊಳ್ಳಿ.
ಆಗ ಒತ್ತಡದ (Pressure) ಪ್ರಮಾಣ ಹೆಚ್ಚಾಗುತ್ತದೆ. ಆಗ ದೇಹದಲ್ಲಿ ಒತ್ತಡದ ಹಾರ್ಮೋನ್ ಗಳು ಬಿಡುಗಡೆಯಾಗುತ್ತವೆ. ಅವುಗಳನ್ನು ಅಡಾರ್ಲಿಂಗ್ ಮತ್ತು ಕಾರ್ಟರಿಜಲ್
ಎಂದು ಗುರುತಿಸಲಾಗಿದೆ. ಇವುಗಳು ಹೃದಯದ ಬಡಿತವನ್ನು ಹೆಚ್ಚಿಸುವುದರ ಜೊತೆಗೆ ರಕ್ತನಾಳಗಳನ್ನು ಸಣ್ಣದಾಗಿಸುತ್ತವೆ. ಇಂತಹ ಸಂದರ್ಭದಲ್ಲಿ ತಾತ್ಕಾಲಿಕವಾಗಿ ರಕ್ತದೊತ್ತಡ ಹೆಚ್ಚಾಗಿರುತ್ತದೆ. ಕ್ರಮೇಣ ಇದರ ಪ್ರಮಾಣ ನಿಯಂತ್ರಿಸಲು ಸಾಧ್ಯವಾಗದ ಮಟ್ಟಿಗೆ ತಲುಪುತ್ತದೆ. ರಕ್ತದೊತ್ತಡದಿಂದ ಕೋಪ ಬರುವುದಿಲ್ಲ ಬದಲಾಗಿ ಕೋಪದಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಕೋಪ ಮಾಡಿಕೊಳ್ಳುವುದು ಮನುಷ್ಯ ಅಥವಾ ಪ್ರಾಣಿಯಲ್ಲಿ ಕಂಡುಬರುವ ಸಾಮಾನ್ಯ ಭಾವನೆಯಾಗಿದೆ. ಆದರೆ, ಕೋಪವನ್ನು ನಿಯಂತ್ರಿಸುವ ಮಟ್ಟಿಗೆ ಮಾಡಿಕೊಳ್ಳುವುದು ಸೂಕ್ತ. ಉದಾಹರಣೆಗೆ ಯಾವುದಾದರೂ ಒಂದು ಘಟನೆ ನಡೆದಿರುತ್ತದೆ ಅಥವಾ ಯಾವುದೋ ಒಂದು ವಿಷಯಕ್ಕೆ ಕೋಪ ಬರುತ್ತದೆ ಅಥವಾ ಮನೆಯವರು ನಿಮ್ಮ ಭಾವನೆಗಳಿಗೆ ವ್ಯೆರಿಕ್ತವಾಗಿ ನಡೆದುಕೊಂಡಾಗ ಕೋಪ ಬರುವುದು ಸಹಜ. ಅದು ಕೆಲವೇ ನಿಮಿಷಗಳಲ್ಲಿ ಕಡಿಮೆಯಾಗಬೇಕು. ಆಗ ಅದು ರಕ್ತದೊತ್ತಡವಾಗಿ ಬದಲಾಗುವುದಿಲ್ಲ. ಆದರೆ ಅದೇ ವಿಚಾರವನ್ನು ತಲೆಯಲ್ಲಿಟ್ಟುಕೊಂಡರೆ ಕೋಪ ಹಾಗೆಯೇ ಮುಂದುವರಿಯುತ್ತದೆ. ಯಾವುದೇ ಘಟನೆ ನಡೆದಿದೆ ಎಂದಾದರೆ, ಅದರ ಬಗ್ಗೆ ಸಿಟ್ಟು ಬಂದಿದೆ ಎಂದಾದರೆ ಅದನ್ನು ಕೂಡಲೇ ಮರೆತುಬಿಡಬೇಕು ಜೊತೆಗೆ ಕ್ಷಮಿಸುವಂತಹ ಗುಣವನ್ನು ಬೆಳೆಸಿಕೊಳ್ಳಬೇಕು. ನಗುನಗುತ್ತಾ ಸಂತೋಷದಿಂದ ಇರುವುದಕ್ಕೆ ಪ್ರಯತ್ನಿಸಬೇಕು. ಸಂತೋಷದಿಂದಿದ್ದರೆ ಯಾವುದೇ ಕಾರಣಕ್ಕೂ ರಕ್ತದೊತ್ತಡ ಹೆಚ್ಚಾಗುವುದಿಲ್ಲ. ಅದಕ್ಕಾಗಿ ಹೆಚ್ಚುಕಾಲ ನಗುತಿರಲು ಪ್ರಯತ್ನಿಸೋಣ.
ರಕ್ತದೊತ್ತಡವನ್ನು ಯಾವಾಗ, ಎಷ್ಟು ಬಾರಿ ಚೆಕ್ ಮಾಡಿಸಿಕೊಳ್ಳಬೇಕು?
ರಕ್ತದೊತ್ತಡವನ್ನು ಯಾವಾಗ ಚೆಕ್ ಮಾಡಿಸಬೇಕು ಅಂದರೆ ಬೆಳಿಗ್ಗೆ, ಮಧ್ಯಾಹ್ನ ಅಥವಾ ರಾತ್ರಿ ಚೆಕ್ ಮಾಡಿಸಬೇಕೆ? ಯಾವ ರೀತಿ ಚೆಕ್ ಮಾಡಿಸಬೇಕು? ಕುಳಿತುಕೊಂಡೆ ಅಥವಾ ನಿಂತುಕೊಂಡೆ ಚೆಕ್ ಮಾಡಿಸಬೇಕೆ? ಎಷ್ಟು ದಿನಗಳಿಗೊಮ್ಮೆ ಚೆಕ್ ಮಾಡಿಸಬೇಕು? ಒಂದು ವೇಳೆ ರಕ್ತದೊತ್ತಡ ಚೆಕ್ ಮಾಡಿಸಿಕೊಳ್ಳುವಾಗ ಅನುಸರಿಸಬೇಕಾದ ನಿಯಮಗಳೇನು? ಎಂಬುದರ ಬಗ್ಗೆ ತಿಳಿದುಕೊಳ್ಳೋಣ…
ಮೊದಲನೆಯದಾಗಿ ನಾವು ಯಾವ ಪರಿಸ್ಥಿತಿಯಲ್ಲಿ ರಕ್ತದೊತ್ತಡವನ್ನು ಚೆಕ್ ಮಾಡಿಸುತ್ತೇವೆ ಎಂಬುದು ಮುಖ್ಯ. ಸಾಮಾನ್ಯವಾಗಿ ಮನೆಯಲ್ಲಿ ಬಿಪಿ ಆಪರೇಟರ್ ಇದೆ ಎಂಬ ಕಾರಣಕ್ಕೆ ಅನವಶ್ಯಕವಾಗಿ ಪದೇ ಪದೇ ಬಿಪಿ ಚೆಕ್ ಮಾಡಿಕೊಳ್ಳಬಾರದು.
ಎರಡನೆಯದಾಗಿ ವಯಸ್ಸಿಗೆ ಅನುಗುಣವಾಗಿ ರಕ್ತದೊತ್ತಡ ಚೆಕ್ ಮಾಡಿಸಿಕೊಳ್ಳಬಾರದು. ಉದಾಹರಣೆಗೆ ನಿಮಗೆ 30 ವರ್ಷ ಅಥವಾ 40 ವರ್ಷ ವಯಸ್ಸಾಗಿದೆ ಎಂದು ಭಾವಿಸಿ ನಿರಂತರವಾಗಿ ರಕ್ತದೊತ್ತಡವನ್ನು ಚೆಕ್ ಮಾಡಿಸಬಾರದು
ಮೂರನೆಯದಾಗಿ ಉಚಿತ ಆರೋಗ್ಯ ಶಿಬಿರಗಳಲ್ಲಿ ರಕ್ತದೊತ್ತಡ ಅಥವಾ ಡಯಾಬಿಟಿಸ್ ಅನ್ನು ಚೆಕ್ ಮಾಡಿಸಬಾರದು. ಏಕೆಂದರೆ ಆಸ್ಪತ್ರೆಯಲ್ಲಿ ಸಿಕ್ಕ ಅಂಕಿ ಅಂಶಕ್ಕೂ (ರೇಟಿಂಗ್ಸ್) ಇಲ್ಲಿ ಸಿಕ್ಕ ಅಂಕಿ ಅಂಶಕ್ಕೂ ವ್ಯತ್ಯಾಸ ಇರುತ್ತದೆ ಇದರಿಂದಾಗಿ ಆತಂಕಕ್ಕೆ ಕಾರಣವಾಗಬಹುದು.
ನಾಲ್ಕನೆಯದಾಗಿ ಪೋಷಕರಿಗೆ ರಕ್ತದೊತ್ತಡವಿತ್ತು ನಮಗೆ ಇರಬಹುದು ಎಂದು ಭಾವಿಸಿ ಅನಾವಶ್ಯಕವಾಗಿ ರಕ್ತದೊತ್ತಡವನ್ನು ಚೆಕ್ ಮಾಡಿಸಬಾರದು. ಪೋಷಕರಿಂದ ಮಕ್ಕಳಿಗೆ ಯಾವುದೇ ಕಾರಣಕ್ಕೂ ರಕ್ತದೊತ್ತಡ ಬರುವುದಿಲ್ಲ. ಒಂದು ವೇಳೆ ಲಕ್ಷಣಗಳಿದ್ದರೆ ಮಾತ್ರ ಚೆಕ್ ಮಾಡಿಸಿಕೊಳ್ಳಿ.
ಐದನೆಯದಾಗಿ ನಿರಂತರ ತಲೆನೋವು, ವಿಶ್ರಾಂತಿ ಪಡೆದರು ತಲೆನೋವು ಕಡಿಮೆಯಾಗದಿರುವುದು, ಮೂಗಿನಲ್ಲಿ ರಕ್ತಸ್ರಾವ, ಬೆವರುವಿಕೆ, ವಾಂತಿ ಆಗುತ್ತಿದ್ದರೆ ಮಾತ್ರ ರಕ್ತದೊತ್ತಡ ಚೆಕ್ ಮಾಡಿಸಿಕೊಳ್ಳಬೇಕು.
ಯಾವ ಸಮಯದಲ್ಲಿ ರಕ್ತದೊತ್ತಡ ಜಾಸ್ತಿ ಆಗುತ್ತದೆ: ಬೆಳಿಗ್ಗೆ 4 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ರಕ್ತದೊತ್ತಡ ಜಾಸ್ತಿ ಆಗಿರುತ್ತದೆ. ಸಂಜೆ 4ರ ನಂತರ ರಾತ್ರಿ ವೇಳೆಯಲ್ಲಿ ರಕ್ತದೊತ್ತಡ ಕಡಿಮೆ ಇರುತ್ತದೆ. ಆದ್ದರಿಂದ ರಾತ್ರಿ ವೇಳೆ ರಕ್ತದೊತ್ತಡ ಚೆಕ್ ಮಾಡಿಸುವುದು ಸೂಕ್ತ.
ಯಾವ ವಿಧಾನದಲ್ಲಿ ರಕ್ತದೊತ್ತಡ ಚೆಕ್ ಮಾಡಿಸಬೇಕು: ಆಸ್ಪತ್ರೆಯಲ್ಲಿ ರಕ್ತದೊತ್ತಡ ಚೆಕ್ ಮಾಡಿಸುವ ಸಮಯದಲ್ಲಿ ರೋಗಿಯು ಕುಳಿತುಕೊಂಡಿರಬೇಕು. ಆಗ ಸಿಗ್ಮಮ್ಯಾನೋಮೀಟರ್‌ನಲ್ಲಿ ತಪಾಸಣೆ ನಡೆಸಬೇಕು. ಅದು ಹೃದಯದ ಹಂತದಲ್ಲಿರಬೇಕು. ಜೊತೆಗೆ ರೋಗಿ ಧರಿಸಿದ್ದ ಬಟ್ಟೆಯನ್ನು ದೂರ ಸರಿಸಿ ಕ್ರಾಫ್ ಅನ್ನು ಎಡಗೈ ತೋಳಿಗೆ ಕಟ್ಟಬೇಕು.
ಯಾವ ಯಂತ್ರದಲ್ಲಿ ರಕ್ತದೊತ್ತಡ ಚೆಕ್ ಮಾಡಿಸಬೇಕು: ಸಿಗ್ಮಮ್ಯಾನೋಮೀಟರ್‌ನಲ್ಲಿ ನಿಖರತೆ ಇರುತ್ತದೆ. ಆದರೆ, ಡಿಜಿಟಲ್ ಯಂತ್ರದಲ್ಲಿ ನಿಖರತೆ ಇರುವುದಿಲ್ಲ. ಜೊತೆಗೆ ಅಂಕಿ ಅಂಶಗಳಲ್ಲಿ ಅಂದರೆ ರೇಟಿಂಗ್ಸ್ ವ್ಯತ್ಯಾಸ ಕಂಡು ಬರುತ್ತದೆ.
ಎಷ್ಟು ದಿನಗಳಿಗೊಮ್ಮೆ ರಕ್ತದೊತ್ತಡ ಚೆಕ್ ಮಾಡಿಸಬೇಕು: ಲಕ್ಷಣಗಳಿಲ್ಲ ಎಂದರೆ ಆರು ತಿಂಗಳಿಗೊಮ್ಮೆ ಚೆಕ್ ಮಾಡಿಸಿಕೊಂಡರೆ ಸಾಕು
ರಕ್ತದೊತ್ತಡ ಚೆಕ್ ಮಾಡಿಸುವಾಗ ಅನುಸರಿಸಬೇಕಾದ ನಿಯಮಗಳು: ರಕ್ತದೊತ್ತಡ ಚೆಕ್ ಮಾಡಿಸುವ ಮುನ್ನ 30 ನಿಮಿಷ ರಿಲ್ಯಾಕ್ಸ್ ಆಗಿ ಇರಬೇಕು. ಉಸಿರಾಟ ಸಾಮಾನ್ಯವಾಗಿರಬೇಕು. ಗಡಿಬಿಡಿಯಲ್ಲಿ ರಕ್ತದೊತ್ತಡವನ್ನು ಚೆಕ್ ಮಾಡಿಸಬಾರದು. ಉಸಿರಾಟದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗಬಾರದು.
ಅದೇ ರೀತಿ ಪದೇ ಪದೇ ರಕ್ತದೊತ್ತಡವನ್ನು ಚೆಕ್ ಮಾಡಿಸಿಕೊಳ್ಳಬಾರದು. ಜೊತೆಗೆ ಅನಗತ್ಯವಾಗಿ ಬೇರೆ ಬೇರೆ ಔಷಧಿಗಳನ್ನು ತೆಗೆದುಕೊಳ್ಳಬಾರದು. ಮೂರು ಅಥವಾ ನಾಲ್ಕು ದಿನಗಳ ಅಂತರದಲ್ಲಿ ರಕ್ತದೊತ್ತಡ ಚೆಕ್ ಮಾಡಿಸಬೇಕು. ಕಾಯಿಲೆ ಬಗ್ಗೆ ಹೆಚ್ಚು ಯೋಚಿಸುವ ಬದಲು ಆರೋಗ್ಯದ ಬಗ್ಗೆ ಗಮನ ಹರಿಸುವುದು ಸೂಕ್ತ.